ಗಾಂವಕಾರ, ಸ. ಪ.
1887-1972. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗ. ಶಿಕ್ಷಣ ತಜ್ಞ. ದಕ್ಷ ಆಡಳಿತಗಾರ. ಸಮಾಜ ಸುಧಾರಕ ಮತ್ತು ಕವಿ. ಸಣ್ಣಪ್ಪ ಪರಮೇಶ್ವರಪ್ಪ ಗಾಂವಕಾರರು ಉತ್ತರಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ತೊರ್ಕೆ ಗ್ರಾಮದಲ್ಲಿ 1887 ಜನವರಿ 11 ರಂದು ಜನಿಸಿದರು. ಪರಮೇಶ್ವರ ಗಾಂವಕಾರರ ಏಳು ಗಂಡುಮಕ್ಕಳ ಪೈಕಿ ಇವರು ನಾಲ್ಕನೆಯವರು. ಪ್ರಾಥಮಿಕ ಶಿಕ್ಷಣದ ಅನಂತರ ಉಪಾಧ್ಯಾಯ ವೃತ್ತಿಗೆ ತರಬೇತು ಪಡೆದರು. ಅನಂತರ ತದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಈ ವೃತ್ತಿಯಲ್ಲಿ ನಿರತರಾಗಿದ್ದಾಗಲೆ ಅವರು ಖಾಸಗಿಯಾಗಿ ವ್ಯಾಸಂಗ ಮಾಡಿ ಧಾರವಾಡದಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು. ಧಾರವಾಡ, ಸಾಂಗ್ಲಿಗಳಲ್ಲಿ ಶಿಕ್ಷಣ ಮುಂದುವರಿಸಿ ನಲ್ವತ್ತನೆಯ ವರ್ಷಕ್ಕೆ ಬಿ.ಎ. ಪದವೀಧರರಾದರು. ಅನಂತರ ಅವರಿಗೆ ಹುಬ್ಬಳ್ಳಿಯ ಸ್ಕೂಲ್ ಬೋರ್ಡಿನ ಆಡಳಿತ ಅಧಿಕಾರಿಯ ಹುದ್ದೆ ದೊರಕಿತು. 12 ವರ್ಷ ಈ ಹುದ್ದೆ ನಿರ್ವಹಿಸಿ ನಿವೃತ್ತ ರಾದರು. ಅನಂತರ ಗಾಂಧಿಯವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನನು ಭವಿಸಬೇಕಾಯಿತು. ಬಂಧನದಿಂದ ಹೊರಬಂದ ಅನಂತರ ಮುಂಬಯಿ ಪ್ರಾಂತ್ಯದಲ್ಲಿ ಖೇರ್ ಮುಖ್ಯಮಂತ್ರಿತ್ವದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಸರ್ಕಾರದಲ್ಲಿ ಇವರು ಉಪಮಂತ್ರಿಗಳಾದರು. ಸ್ವಾತಂತ್ರ್ಯಾನಂತರವೂ ರಾಜಕೀಯದಲ್ಲಿ ಆರು ವರ್ಷ ದುಡಿದರು. ಅನಂತರ ಇವರ ಮನಸ್ಸು ಅಸ್ಪೃಶ್ಯತಾ ನಿವಾರಣೆ, ದೀನದಲಿತೋದ್ಧಾರ, ಮಹಿಳಾ ಶಿಕ್ಷಣಗಳ ಕಡೆಗೆ ಹರಿಯಿತು. ಜಿಲ್ಲೆಯ ಹಿಂದುಳಿದ ಜನಾಂಗವಾದ ಹಾಲಕ್ಕಿ ಒಕ್ಕಲಿಗರ ಏಳ್ಗೆಗಾಗಿ ಬಹಳ ದುಡಿದರು. ವಾಚನಾಲಯ, ವಿದ್ಯಾರ್ಥಿ ವಸತಿ ಸೌಕರ್ಯ, ರೈತರ ಸಂಘಟನೆ, ಪ್ರೌಢಶಾಲಾ ಸ್ಥಾಪನೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದರು. ಅಂಕೋಲೆಯಲ್ಲಿ ಕಾಲೇಜು ಸ್ಥಾಪನೆಯಾಗಲು ಇವರೂ ಕಾರಣರು. ಗಾಂಧಿ ತತ್ತ್ವ ಮತ್ತು ಜೀವನವಿಧಾನಗಳ ಶಿಕ್ಷಣ ಪ್ರಚಾರಗಳಿಗಾಗಿ ಇವರು ಗಾಂಧಿ ನಿವಾಸವನ್ನು ಸ್ಥಾಪಿಸಿದರು. ಗಾಂವಕಾರರಿಗೆ ಅರವಿಂದರ ತತ್ತ್ವದಲ್ಲೂ ವಿಶೇಷವಾದ ಆಸಕ್ತಿ ಇತ್ತು. ಮತಾಂತರ ಹೊಂದಿದ ಹಿಂದೂಗಳನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಬೇಕೆಂಬ ಆರ್ಯಸಮಾಜದ ವಿಚಾರದಲ್ಲಿ ಇವರಿಗೆ ಶ್ರದ್ಧೆ ಇತ್ತು. ಕೆಲಕಾಲ ಆರ್ಯಸಮಾಜದ ಕಾರ್ಯಕರ್ತರಾಗಿ ಆ ಕೆಲಸ ಮಾಡಿದ್ದೂ ಉಂಟು.

ಇವರು ಕವಿಗಳೂ ಹೌದು. ಇವರ ಮೊದಲನೆಯ ಕವನಸಂಕಲನ ಮುಗಿಲು. ರವೀಂದ್ರನಾಥ ಠಾಕೂರರ ಗೀತಾಂಜಲಿಯನ್ನು ಸರಳ ಶೈಲಿಯಲ್ಲಿ ಕನ್ನಡಕ್ಕೆ ಭಾಷಾಂತರಿಸಿ ದ್ದಾರೆ. ಪ್ರಕೃತಿ-ಪ್ರೀತಿ, ಪ್ರೇರಣೆ-ಶೋಧನೆ ಇವು ಇವರ ಇನ್ನೆರಡು ಕವನ ಸಂಕಲನಗಳು.                                  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ